
ಚಿತ್ರದುರ್ಗ : ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾ. ಸಿ.ಕೆ. ಕಿರಣ್‍ಕುಮಾರ್ ಅವರು ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕ್ಲಿಷ್ಟಕರವಾದ ಸುಮಾರು 5 ಗಂಟೆಗಳ ಕಾಲ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದ್ದಾರೆ.
ಡಾ. ಕಿರಣ್‍ಕುಮಾರ್ ನ್ಯೂರೋ ಸರ್ಜರಿಯನ್ನು ಹೈದರಾಬಾದ್‍ನಲ್ಲಿ ಮುಗಿಸಿದ್ದು, ಸದ್ಯ ಬಸವೇಶ್ವರ ಆಸ್ಪತ್ರೆಯಲ್ಲಿ ಸ್ಟ್ರೋಕ್, ಬೆನ್ನುಮೂಳೆ ಮತ್ತು ಡಿಸ್ಕ್ ಸಮಸ್ಯೆಗಳಿಗೆ ಚಿಕಿತ್ಸಾ ಪರಿಣಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಜೀರ್ ಎಂಬ ರೋಗಿಯ ಮೆದುಳಿಗೆ ತೀವ್ರ ಪೆಟ್ಟಾಗಿ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ರೋಗಿಗೆ ಸಿಟಿ ಸ್ಕ್ಯಾನ್ ಮಾಡಿದ ಡಾ. ಕಿರಣ್‍ಕುಮಾರ್ ಅವರು ಕುಟುಂಬಸ್ಥರ ಒಪ್ಪಿಗೆ ಪಡೆದು ರಾತ್ರಿ 12ಕ್ಕೆ ಶುರುವಾದ ಮೆದುಳಿನ ಶಸ್ತ್ರಚಿಕಿತ್ಸೆ ಬೆಳಗ್ಗೆ 5 ರವರೆಗೆ ನಡೆಸಿ ಯಶಸ್ವಿಯಾಗಿರುತ್ತಾರೆ.
ಇವರ ಜತೆ ಅನಸ್ತೇಶಿಯ ಡಾ. ಅಫ್ಜಲ್, ಡಾ. ಮೇಘ ಮತ್ತು ಡಾ. ಜಗದೀಶ್ ತಂಡದಲ್ಲಿದ್ದರು. ರೋಗಿಯು ಆರೋಗ್ಯವಾಗಿದ್ದಾರೆ. ಈ ಸಂದರ್ಭದಲ್ಲಿ ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತ ಆಸ್ಪತ್ರೆಯ ಡೀನ್ ಡಾ. ಪ್ರಶಾಂತ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಪಾಲಾಕ್ಷಯ್ಯ ಅವರಿಗೆ ಕಿರಣ್‍ಕುಮಾರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಇಲ್ಲಿಯವರೆಗು ಚಿತ್ರದುರ್ಗದಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ನಿರ್ವಹಿಸುವ ವೈದ್ಯರು ಹಾಗು ಅದಕ್ಕೆ ತಕ್ಕ ಸೌಲಭ್ಯ ಇರದ ಕಾರಣ ಜನರು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಿತ್ತು. ಈ ತರಹದ ಸಮಸ್ಯೆ ತುಂಬಾ ಸೀರಿಯಸ್ ಆಗಿರುವುದರಿಂದ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಂತಹ ಅನೇಕ ಘಟನೆಗಳು ಜರುಗಿವೆ. ಮತ್ತು 8 ರಿಂದ 10 ಲಕ್ಷದವರೆಗೆ ಹಣವನ್ನು ವ್ಯಯಿಸಬೇಕಿತ್ತು. ಬಹಳಷ್ಟು ಜನರು ಅಷ್ಟೊಂದು ಮೊತ್ತವನ್ನು ಪಾವತಿಸಲಾಗದೆ ಕೈಚೆಲ್ಲಿ ಹಿಂದಿರುಗಿದ್ದು ಉಂಟು. ಈ ಸೌಲಭ್ಯಗಳು ಬಸವೇಶ್ವರ ಆಸ್ಪತ್ರೆಯಲ್ಲಿ ಲಭ್ಯವಿರುವುದರಿಂದ ಈ ಭಾಗದ ರೋಗಿಗಳಿಗೆ ಹೆಚ್ಚಿನ ನೆರವಾಗಲಿದೆ.
For More Information
Comments